Sunday , January 17 2021
Breaking News
Home / Khabar Exclusive ಕನ್ನಡ / ನೆಲಕ್ಕುದುರಿದ ಪದ್ಯಗಳು

ನೆಲಕ್ಕುದುರಿದ ಪದ್ಯಗಳು

ರಚನೆ: ಪ್ರವರ ಕೊಟ್ಟೂರು

ರಾತ್ರಿಯ ಮಡುವಲ್ಲಿ
ಹಾರಲಾರದ ಸಣ್ಣ ಕೀಟಗಳಂತೆ
ಮಲಗಿದ್ದೇವೆ, ಪರಸ್ಪರ ರೆಕ್ಕೆ ಮುರಿದುಕೊಂಡು

ಮೆತ್ತನೆಯ ತೊಡೆಗೆ ತಲೆಯಿಟ್ಟು
ತಿರುಗಲಾರದ ಫ್ಯಾನಿನತ್ತ
ನೋಡುತ್ತಿರುವ ನಾನು, ಅಲ್ಲೇ ಸುರುಳಿ ಸುತ್ತುತ್ತಿರುವ
ಹೊಗೆಯ ಮಾತುಗಳ ಆಲಿಸಲು
ಉತ್ಸುಕನಾಗಿದ್ದೇನೆ

ಧೂಳು ಹಿಡಿದ ಟೇಬಲ್ಲಿನ ಮೇಲೆ
ಪದ್ಯ ಮತ್ತು ಪದ್ಯ ತುಂಬಿದ ಹಾಳೆ,
ತೀಕ್ಷ್ಣ ಬೆಳಕಿನ ನಡುವೆ ಹಗುರಕ್ಕೆ ನಡೆಯುತ್ತಿ,
ಲಜ್ಜೆ ಕೊಡವಿ ಅಲ್ಲೇ ನೆಲದ ಮೇಲೆ ಬಿದ್ದವು.

ಕುರ್ಚಿಯಲ್ಲಿ ಬೆತ್ತಲು ಹರವಿ ಕುಳಿತು
ಎರಡು ಗುಟುಕು ವೋಡ್ಕ ಇಳಿಸಿ
ಸಾವಕಾಶವಾಗಿ ಓದುತ್ತೀ,
ವಿರಹಿ ಕವಿಯೊಬ್ಬನ, ಅವಿವಾಹಿತನ,
ಕುಡುಕನೊಬ್ಬನ, ಎದೆಗೂಡಿನಲ್ಲೇ ತೊಳಲಾಡುತ್ತಿರುವ,
ಹೆಣ್ಣುಗಳ ಮೋಹಿಸಿದವನ, ಪರಮ ಪಾಪಿಯ,
ವಿಟಪುರುಷನ
ನೀನು ಬಿಟ್ಟ ಉಸಿರು
ಎದೆ ರೋಮಗಳಿಗೆ ಬೆಂಕಿ ಹಚ್ಚಿತು

ವಾಚಾಳಿ ಬೆವರು
ಪದ್ಯ ಓದಲು ಬಿಡದು,
ಕೂದಲು ಹರವಿ ಕುಳಿತ ನಿನ್ನ ನೆರಳ
ನನ್ನ ಇನ್ನಿಲ್ಲದಂತೆ ಸುಡುತ್ತದೆ,
ಕುಡಿದರೂ ವಾಲಾಡುತ್ತಿಲ್ಲ
ನಿಚ್ಚಳ ನಿರಾಳ

ಗಾಳಿಗೂ ಒಣಗದ ಹಸಿ ಕೂದಲು,
ಎದೆ ಮಾತ್ರ ಶುದ್ಧ ಮರಳುಗಾಡು.

ಯಾವುದೋ ಕಾಲಕ್ಕೆ ಬತ್ತಿದ ಸಮುದ್ರ
ತುಂಡರಿಸಿ ಬಿದ್ದ ಹಡಗು
ಕೊಳ್ಳೆ ಹೊಡೆದ ಖಜಾನೆ
ತಲೆ ಬುರುಡೆ
ಡೆಕ್ಕಿನ ಮೇಲೆಯೇ ಎದೆಗೊತ್ತಿಗೊಂಡ
ಪ್ರೇಮಿ

ಕಿಡಕಿಯಲ್ಲಿ ಅಡ್ಡಲಾಗಿ ಹಾರಿದ
ಪಾರಿವಾಳ
ಕನಲಿಸಿತು,
ನೆಲಕ್ಕುದುರಿದ ಪದ್ಯಗಳ
ಆಯ್ದುಕೊಳ್ಳಲು ತಡಕಾಡಿದಳು.

Check Also

विश्व हिन्दी दिवस की शुरुआत कब औऱ किसने किया ? पूरी खबर पढे

• पूर्व प्रधानमन्त्री मनमोहन सिंह ने 10 जनवरी 2006 में प्रत्येक वर्ष की इसी तारीख़ ...

One comment

  1. Very nice

Leave a Reply

Your email address will not be published. Required fields are marked *